ಉತ್ತಿಷ್ಠ ಕೌಂತೇಯ
ಉತ್ತಿಷ್ಠ ಎಂದರೆ ಏಳುವುದು, ಎದ್ದು ನಿಲ್ಲುವುದು ಅಥವಾ ಹೋರಾಟಕ್ಕೆ ನಿಲ್ಲುವುದು ಎಂದರ್ಥ. ಎಂಥದೇ ಅಡಚಣೆ ಅಥವಾ ವಿಫಲತೆಯ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ಅಥವಾ ಗುರಿಯನ್ನು ತಲುಪಲು ವ್ಯಕ್ತಿಯೊಬ್ಬನು ಕುಂದದ ಹುರುಪಿನೊಂದಿಗೆ ಮತ್ತೆ ತನ್ನನ್ನು ಅಣಿಯಾಗಿಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಯುಗದ ಅನಿವಾರ್ಯತೆಗಳಲ್ಲೊಂದು.
ಮಾನವರಾಗಿ ನಾವು ಜೀವನದಲ್ಲಿ ಮಹತ್ತರವಾದುದನ್ನೇನೋ ಸಾಧಿಸಲು ಹಾತೊರೆಯುತ್ತೇವೆ. ಆ ಸಾಧನೆಯ ಹಾದಿಯಲ್ಲಿ ಅನೇಕ ತೊಂದರೆಗಳನ್ನು ಎದುರಿಸುತ್ತೇವೆ. ಅವು ಭಾವನಾತ್ಮಕವಾಗಿರಬಹುದು, ಮಾನಸಿಕವಾಗಿರಬಹುದು, ಶಾರೀರಿಕವಾಗಿರಬಹುದು, ಆರ್ಥಿಕವಾಗಿರಬಹುದು ಕಾನೂನಾತ್ಮಕವಾಗಿರಬಹುದು ಅಥವಾ ಮತ್ತಿನ್ನೇನೋ ಆಗಿರಬಹುದು. ಆದರೂ ಸಹ, ಜೀವನವು ನಮ್ಮೆಡೆಗೆ ಕಠಿಣ ಸವಾಲುಗಳನ್ನೆಸೆದಾಗ ಆ ಸವಾಲುಗಳನ್ನು ಜಾಣತನದಿಂದ, ತಾಳ್ಮೆಯಿಂದ ಎದುರಿಸಿ ನಾವು ಗಮ್ಯವನ್ನು ತಲುಪಲೇಬೇಕು.
ಕಠಿಣತೆಗಳನ್ನು ಎದುರಿಸಿ, ಗುರಿ ತಲುಪುವುದು ಹೇಳಿದಷ್ಟು ಸುಲಭವೇನಲ್ಲ. ಎಂಥ ವಿಷಮತೆಯಲ್ಲೂ ಸಾಧಕನು ಆತ್ಮವಿಶ್ವಾಸ ಎಂಬ ಕವಚ ತೊಟ್ಟು ಯುದ್ಧಸನ್ನದ್ಧನಾಗಬೇಕಾಗುತ್ತದೆ. ಆದರೆ, ಆತ್ಮವಿಶ್ವಾಸ ಎಂಬುವುದು ಒಬ್ಬನ ವ್ಯಕ್ತಿತ್ವದಲ್ಲಿ ತಂತಾನೇ ಹುಟ್ಟಿನಿಂದ ಬರುವಂಥದಲ್ಲ. ಗುರಿಯೊಂದರ ನಿರ್ದಿಷ್ಟ ಮಾರ್ಗದಲ್ಲಿ ಸರಿಯಾದ ಪ್ರಯತ್ನಗಳ ಮೂಲಕ ಮಾತ್ರ ಪಡೆಯಲು ಸಾಧ್ಯವಾದ ಆತ್ಮವಿಶ್ವಾಸವನ್ನು ಗಳಿಸಲು ವ್ಯಕ್ತಿಯು ನಿರಂತರವಾಗಿ ಪ್ರಯತ್ನಿಸಬೇಕು.
ವ್ಯಕ್ತಿಯೊಬ್ಬನ ಪ್ರಯತ್ನಗಳು ಆತನನ್ನು ಗುರಿಯೆಡೆಗೆ ಮುನ್ನಡೆಸುತ್ತವೆ. ಯಶಸ್ವಿಯಾಗಿ ಗುರಿಯೊಂದನ್ನು ತಲುಪಿದ ನಂತರ, ವ್ಯಕ್ತಿಯು ಹೆಚ್ಚು ಆತ್ಮವಿಶ್ವಾಸ ಹೊಂದಿ ಮತ್ತೆ ಮಹತ್ತರ ಗುರಿಯನ್ನು ಹೊಂದುತ್ತಾನೆ. ಅದರರ್ಥ, ʼಆತ್ಮವಿಶ್ವಾಸʼ ಮತ್ತು ʼಯಶಸ್ಸುʼ ಗಳಿಗೆ ಪ್ರಯತ್ನ ಎಂಬುದು ಅತ್ಯಗತ್ಯ ಅಂಶ. ಕೇವಲ ಸತತ ಪ್ರಯತ್ನಗಳಿಂದ ಮಾತ್ರ ಅದೃಷ್ಟ ನಮ್ಮದಾಗಲು ಸಾಧ್ಯ.
ಹಿತೋಪದೇಶದ ಉಕ್ತಿಯೊಂದನ್ನು ಉಲ್ಲೇಖಿಸುವುದಾದರೆ,
ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್|
ಏವಂ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ|| (ಹಿತೋಪದೇಶ)
ಅಂದರೆ, ಹೇಗೆ ರಥವು ಒಂದೇ ಚಕ್ರದಿಂದ ಚಲಿಸಲು ಸಾಧ್ಯವಿಲ್ಲವೋ, ಅದೇ ರೀತಿ ಕಠಿಣ ಪರಿಶ್ರಮವಿಲ್ಲದೆ ಕೇವಲ ಅದೃಷ್ಟವೊಂದೇ ಫಲವನ್ನು ತರುವುದಿಲ್ಲ. ಕಠಿಣ ಪರಿಶ್ರಮ ಮತ್ತು ಅದೃಷ್ಟ ಎಂಬವುಗಳು ಸಾಧಕನ ʼಜೀವನʼ ಎಂಬ ರಥದ ಎರಡು ಚಕ್ರಗಳು.
ಹಿತೋಪದೇಶದ ಮತ್ತೊಂದು ಉಕ್ತಿಯೊಂದನ್ನು ಉಲ್ಲೇಖಿಸುವುದಾದರೆ,
ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ || (ಹಿತೋಪದೇಶ)
ಇದರರ್ಥ, ಕಾರ್ಯವೊಂದು ಪ್ರಯತ್ನದಿಂದ ಮಾತ್ರ ಸಾಧಿಸಲ್ಪಡುತ್ತದೆ, ಕೇವಲ ಆಶಯದಿಂದಲ್ಲ. ಮಲಗಿರುವ ಸಿಂಹದ ಬಾಯಿಯನ್ನು ಪ್ರಾಣಿಗಳು ತಾವಾಗೇ ಪ್ರವೇಶಿಸುವುದಿಲ್ಲ. ಬದಲಾಗಿ ಹಸಿದ ಆ ಸಿಂಹವು ಎದ್ದು ಬೇಟೆಯಾಡಿಯೇ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕು. ಪ್ರಯತ್ನಪಡದಿದ್ದರೆ ಆ ಸಿಂಹವು ಹಸಿವಿನಿಂದ ನರಳಬೇಕಾಗುತ್ತದೆ.
ಅದೇ ರೀತಿ ವ್ಯಕ್ತಿಯೊಬ್ಬನು ಕೇವಲ ಗುರಿಯೊಂದನ್ನು ಹೊಂದಿದ್ದರೆ ಸಾಲದು. ಅದನ್ನು ನೆರವೇರಿಸಿಕೊಳ್ಳಲು ಸತತ ಪ್ರಯತ್ನ ಮಾಡಲೇಬೇಕು. ಇಲ್ಲದಿದ್ದರೆ ಆ ಗುರಿಯನ್ನು ಆತ ಎಂದಿಗೂ ತಲುಪುವುದಿಲ್ಲ. ವ್ಯಕ್ತಿಯು ಗುರಿಯನ್ನು ತಲುಪಬೇಕಾದರೆ ತನ್ನ ಜಡತ್ವ ಮತ್ತು ಸೋಮಾರಿತನಗಳಿಂದ ಹೊರಬಂದು ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು ಎಂಬುದು ಈ ಹಿತೋಪದೇಶದ ತಿರುಳು.
ವ್ಯಕ್ತಿಯೊಬ್ಬನ ಪ್ರಗತಿಗೆ ಆತನ ಸೋಮಾರಿತನವೇ ದೊಡ್ಡ ಶತ್ರು. ಆದ್ದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಕಾಶಮಾನವಾಗಿ ಬೆಳಗಲು ತನ್ನ ಸೋಮಾರಿತನವನ್ನು ದೂರವಿಡಲೇಬೇಕು. ಏಕೆಂದರೆ,
ಆಲಸ್ಯ ಕುತೋ ವಿದ್ಯಾ, ಅವಿದ್ಯಸ್ಯ ಕುತೋ ಧನಂ |
ಅಧನಸ್ಯ ಕುತೋ ಮಿತ್ರಂ, ಅಮಿತ್ರಸ್ಯ ಕುತಃ ಸುಖಂ || (ಹಿತೋಪದೇಶ)
ಸೋಮಾರಿಯಾದವನು ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ; ಜ್ಞಾನವಿಲ್ಲದೆ ಸಂಪತ್ತು ಹೊಂದಲು ಸಾಧ್ಯವಿಲ್ಲ; ಸಂಪತ್ತು ಇಲ್ಲದೆ ಆತ ಸ್ನೇಹಿತರನ್ನು ಪಡೆಯಲು ಸಾಧ್ಯವಿಲ್ಲ; ಸ್ನೇಹಿತರಿಲ್ಲದೆ ಸಂತೋಷವಿಲ್ಲ. ಆದ್ದರಿಂದ ಪ್ರಯತ್ನ ಎಂಬುದು ಯಶಸ್ಸಿನ ಕೋಟೆಯನ್ನು ನಿರ್ಮಿಸಲು ಅತ್ಯವಶ್ಯಕವಾಗಿ ಬೇಕಾಗಿರುವ ಸರ್ವೋತ್ಕೃಷ್ಟ ಇಟ್ಟಿಗೆ.
ʼಪ್ರಯತ್ನೇನ ಫಲಂ ಲಭತೇʼ (ಮಹಾಭಾರತ, ಅನುಶಾಸನ ಪರ್ವ ೧೧೩.೮). ಅಂದರೆ, ವ್ಯಕ್ತಿಯು ಪ್ರಯತ್ನದ ಮೂಲಕ ಕ್ರಿಯೆಯ ಫಲವನ್ನು ಪಡೆಯುತ್ತಾನೆ. ಆದ್ದರಿಂದ ನಿಮ್ಮನ್ನು ನೀವು ನಂಬಿರಿ ಮತ್ತು ಮಹತ್ತರ ಉದ್ದೇಶಕ್ಕಾಗಿ ನಿರಂತರವಾಗಿ ನಿಮ್ಮ ಪ್ರಯತ್ನಗಳನ್ನು ಜಾರಿಯಲ್ಲಿರಿಸಿ. ಕೇವಲ ಪ್ರಯತ್ನಗಳು ಮಾತ್ರ ನಮ್ಮನ್ನು ʼನಾವು ಯಾರುʼ ಎಂಬುದನ್ನು ವ್ಯಾಖ್ಯಾನಿಸುತ್ತವೆ. ಹೆಚ್ಚು ಹೆಚ್ಚಿನ ಪ್ರಯತ್ನಗಳು ಮಹತ್ವದ ಯಶಸ್ಸು ಮತ್ತು ತೃಪ್ತಿ ತರುತ್ತವೆ ಹಾಗೂ ಸಮಾಜದಲ್ಲಿ ನಮಗೆ ಒಂದು ಸ್ಥಾನವನ್ನು ನೀಡುತ್ತವೆ.
ಕೊನೆಯದಾಗಿ ಗಮನಿಸಬೇಕಾದ ವಿಷಯವೆಂದರೆ,
ಹತೋ ವಾ ಪ್ರಾಪ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ |
ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ || (ಭಗವದ್ಗೀತೆ ೨/೩೭)
ಈ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನನ್ನು ಕುರಿತು ಹೇಳುತ್ತಾನೆ: ಓ ವೀರನೇ, ನೀನು ಯುದ್ಧ ಮಾಡಿ ರಣರಂಗದಲ್ಲಿ ಕೊಲ್ಲಲ್ಪಟ್ಟರೆ ವೀರಸ್ವರ್ಗ ಸೇರುತ್ತೀಯಾ ಅಥವಾ ನೀನು ಈ ಮಹಾಯುದ್ಧದಲ್ಲಿ ಜಯಶೀಲನಾಗಿ ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುತ್ತೀಯಾ. ಆದ್ದರಿಂದ ಓ ಕುಂತೀ ಪುತ್ರನೇ ದೃಢಸಂಕಲ್ಪದಿಂದ ಎದ್ದು ಯುದ್ಧ ಸನ್ನದ್ಧನಾಗು.
ಶ್ರೀಕೃಷ್ಣನ ಈ ಮಾತುಗಳ ಮರ್ಮವೇನೆಂದರೆ, ನಾವು ಈಗಿರುವ ಪರಿಸ್ಥಿತಿಯಿಂದ ಎದ್ದು ಕಾರ್ಯಸನ್ನದ್ಧರಾಗಬೇಕು. ನಾವು ನಮ್ಮ ಪ್ರಯತ್ನಗಳಲ್ಲಿ ವಿಫಲರಾದರೂ ಸರಿಯೇ ಮುಂದಡಿ ಇಡಬೇಕು. ಇಲ್ಲಿ ನಮ್ಮ ಪ್ರಯತ್ನಗಳಿಗೆ ತಕ್ಕುದಾದ ಫಲ ಇದ್ದೇ ಇರುತ್ತದೆ. ಆದ್ದರಿಂದ ಓ ವೀರನೇ ದಯವಿಟ್ಟು ನಿನಗಾಗಿ ಹೋರಾಡಲು, ನೀನು ಜಯಶೀಲನಾಗಲು ನೀನೇ ಎದ್ದು ನಿಲ್ಲು. ತಸ್ಮಾತ್ ಉತ್ತಿಷ್ಠ ಕೌಂತೇಯ!