ಓದು, ಬದುಕಿಗೆ ಮತ್ತು ಅರಿವಿಗೆ ಅತ್ಯವಶ್ಯಕ ಚಟುವಟಿಕೆ. ಬದುಕನ್ನು ವಿಶಾಲ ದೃಷ್ಟಿಯಿಂದ ನೋಡುವುದು ಮತ್ತು ನಾವಿರುವ ಈ ಐಹಿಕ ಜಗತ್ತನ್ನು ಯಾವ ಪೂರ್ವಾನುಗ್ರಹ ಪೀಡಿತ ದೃಷ್ಟಿಯಿಂದ ನೋಡದೆ ಒಂದು ಅಂತಃಚಕ್ಷುವಿನಿಂದ ಅರಿಯಲು ಓದೆಂಬುದು ಒಂದು ಸಾಧನ.
ಓದೆಂಬುದು ಕೇವಲ ಕಣ್ಣುಗಳಿಂದ ನಡೆಸುವ ಅಕ್ಷರಗಳ ಗಮನವಲ್ಲ. ಅದು ಅರಿವಿಗೆ ಬಾರದ, ಗಹನವೆನಿಸುವ ವಿಷಯವೊಂದರ ಆಳ ಅಧ್ಯಯನ ಮತ್ತು ಆ ವಿಷಯವನ್ನು ಸ್ವಂತವಾಗಿಸಿಕೊಳ್ಳುವಿಕೆ. ಅಂದರೆ, ತಿಳಿಯದಿದ್ದುದನ್ನು ತಿಳಿದು, ಆಂತರ್ಯದಲ್ಲಿ ಹೊಳೆಯುವುದು. ಓದಿನ ಗಮ್ಯವೇ ಅಂತರಂಗದ ಹೊಳಪು.
ಓದು, ವಿದ್ಯಾವಂತನೊಬ್ಬನನ್ನು ನಿಯಂತ್ರಿಸುವ ಅಂಕೆ. ಅಂದರೆ, ಓದಿನ ಮೂಲಕ ವಿದ್ಯಾವಂತನು ತನ್ನ ಅಜ್ಞಾನವನ್ನು ಕಡಿಮೆಗೊಳಿಸುತ್ತಾ ಮತ್ತು ಅದರ ಮೂಲಕ ಜಮಾವಣೆಯಾಗುವ ಜ್ಞಾನದ ಬಲದಿಂದ ವಿನಯವಂತನಾಗುತ್ತಾನೆ; ಅಲ್ಲದೆ, ತಾನಿನ್ನೂ ತಿಳಿಯಬೇಕಾದ ವಿಷಯ ಅನಂತ, ತಾನೇನಿದ್ದರೂ ಅಲ್ಪಜ್ಞಾನಿ ಮಾತ್ರ ಎಂಬ ಸ್ಪಷ್ಡ ವಾಸ್ತವತೆಯೆಡೆಗೆ ಮುನ್ನಡೆಸುವ ಅಂಕುಶ. ಒಟ್ಟಿನಲ್ಲಿ, ಓದು ಎಂಬುದು ಅರಿವಿನ ಮಾರ್ಗದಲ್ಲಿ ನಡೆಯುವವನ ದೀವಟಿಗೆ. ಈ ದೀವಟಿಗೆ ನಿಂತಾಗ ಮುನ್ನಡೆಯಬೇಕಾದ ದಾರಿ ದುರ್ಗಮ.
ಓದು, ಬದುಕಿಗೆ ಮತ್ತು ಅರಿವಿಗೆ ಮೂಲಭೂತ ಕ್ರಿಯೆ ಎಂಬುದನ್ನು ಒಪ್ಪಿದ್ದಾಯ್ತು. ಆದರೆ, ಓದಷ್ಟೇ ನಮಗೆ ಸಾಕೆ? ಊಹ್ಞೂಂ! ಓದಿಗಿಂತ ಬುದ್ಧಿ ಮುಖ್ಯ ಎಂಬುದು ನಮ್ಮ ಜನಪದರ ನಂಬಿಕೆ. ರೂಢಿಗತ ಜನಪದ ಗಾದೆಯನ್ನು ಉಲ್ಲೇಖಿಸುವುದಾದರೆ, “ಓದು ಒಕ್ಕಾಲು, ಬುದ್ಧಿ ಮುಕ್ಕಾಲು”. ಅಂದರೆ, ಬುದ್ಧಿಯೇ ಓದಿಗಿಂತ ಬಹುಮುಖ್ಯ ಅಂಶ.
ಆದರೆ, ಈ ಬುದ್ಧಿಯನ್ನು ಹಲವಾರು ಜನರು ವಿವಿಧ ರೀತಿಯಲ್ಲಿ ಪ್ರಯೋಗಿಸಿದ್ದಾರೆ. ದೇಶಪ್ರೇಮಿಯೊಬ್ಬ, ವಿಜ್ಞಾನಿಯೊಬ್ಬ, ಶಿಕ್ಷಕನೊಬ್ಬ, ಮತ್ತು ಈ ಗುಂಪಿಗೆ ಸೇರುವ ಅನೇಕ ಸಂವೇದನಾಶೀಲ ವ್ಯಕ್ತಿಗಳು ಈ ದೇಶ, ಸಮಾಜ ಉನ್ನತ ಸ್ತರಕ್ಕೇರುವ ಹಾಗೆ ತಮ್ಮ ಸದ್ಬುದ್ಧಿಯನ್ನು ಉಪಯೋಗಿಸಿದ್ದಾರೆ. ಇಂತಹ ಮಹನೀಯರ ಗುಂಪಿನಾಚೆಗೆ, ಧೃವೀಯ ಅಂತರದಲ್ಲಿರುವವರು ವಿದ್ಯಾವಂತರಾದ ಭಯೋತ್ಪಾಕರು, ಸಮಾಜಪೀಡಕರು, ಶಿಕ್ಷಿತ ವಂಚಕರು ಮತ್ತಿತರರು (ಮತಾಂಧರೂ ಸೇರಿ). ಇವರು ವಿನಾಶಕಾರಿಯಂತ ದುರ್ಬುದ್ಧಿಯುಳ್ಳವರು. ಸದ್ಬುದ್ಧಿ ಮತ್ತು ದುರ್ಬುದ್ಧಿ ಗುಂಪುಗಳ ನಡುವಣ ವ್ಯತ್ಯಾಸವೇ ಓದು.
ಓದಿಗಿಂತ ಬುದ್ಧಿ ಮುಖ್ಯ ಎಂಬ ಅಂಶವನ್ನೇನೋ ಒಪ್ಪಿದ್ದಾಯ್ತು. ಆದರೆ, ಬುದ್ಧಿವಂತನೊಬ್ಬ ದಮನಕಾರಿ ವ್ಯಕ್ತಿಯಾಗದಿರಲು, ನಿರಂಕುಶಮತಿಯಾಗದಿರಲು, ದೇಶದ ಅತ್ಯಮೂಲ್ಯ ಆಸ್ತಿಯಾಗಲು, ಭವಿಷ್ಯದ ನಿರ್ಮಾತೃವಾಗಲು ಸಂಸ್ಕಾರಯುಕ್ತ ಓದು ಮುಖ್ಯ. ಇಲ್ಲಿ ನೈತಿಕತೆ ಕೂಡಿದ, ಸಂವೇದನಾಶೀಲತೆ ಇರುವ, ಇನ್ನೊಬ್ಬರ ಅಂತರಂಗ ಅರಿಯುವ, ಪ್ರಗತಿಪರ ವಿಚಾರಗಳ ಅಧ್ಯಯನ ಮುಖ್ಯ. ಇಂತಹ ಅಧ್ಯಯನವೇ ನಿಜವಾದ ಓದು. ಅಂತಹ ಓದೇ ಅರಿವಿಗೆ, ಬದುಕಿಗೆ ಮೂಲ.
ಒಟ್ಟಿನಲ್ಲಿ, ಬದುಕು ಹೊಸ ವಿಚಾರಗಳಿಂದ ಕೂಡಿದ ಬಣ್ಣದ ಕಾಮನಬಿಲ್ಲಾಗಲು, ಗೊನೆ ಭಾರದಿಂದ ಬಾಗುವ ಬಾಳೆ ಗಿಡದಂತಹ ವ್ಯಕ್ತಿತ್ವ ಹೊರಬರಲು, ಮೌಢ್ಯತೆಯ ಮಬ್ಬಿನಿಂದ ಮಾನವೀಯತೆ ಮೆರೆಯುವ ಮುಂಜಾವಿನೆಡೆಗೆ ನಡೆಯಲು, ಓದು ಬಲುಮುಖ್ಯ. ನೈತಿಕತೆ, ಸಂವೇದನಾಶೀಲತೆ, ಪ್ರಗತಿಪರತೆ, ಜನನಿ-ಜನ್ಮಭೂಮಿಗಳ ಬಗ್ಗೆ ಗೌರವಾದರ ಕೂಡಿದ ಸಂಸ್ಕಾರಯುತ ಓದಿನಿಂದ ಬರುವ ಬುದ್ಧಿಯ ಹೊಳಪು ನಮಗತ್ಯಗತ್ಯ, ಅದೇ ಈ ಬಾಳಿನ ಸೌಂದರ್ಯದ ಗುಟ್ಟು.